Oppanna.com

ಪ್ರಬಂಧ ಪ್ರಥಮ – ಕೋವಿಡ್ ನಂತರದ ಜೀವನ ಶೈಲಿ

ಬರದೋರು :   ಸಂಪಾದಕ°    on   30/06/2021    4 ಒಪ್ಪಂಗೊ

ವಿಳಾಸ: Smt. Parameshwari Bhat, Disha, 1_33/1, second main, Near Sunshine public school,
Chikkabommasandra,
PO. GKVK, Bengaluru-560065
(ನಿವೃತ್ತ ಮುಖ್ಯೋಪಾಧ್ಯಾಯಿನಿ, ಕೇಂದ್ರೀಯ ವಿದ್ಯಾಲಯ)

ಶೀರ್ಷಿಕೆಲಿ ಕೊಟ್ಟ ಹಾಂಗೆ “ಕೋವಿಡ್ ನಂತರದ ಜೀವನ ಶೈಲಿ “ಯ ಬಗ್ಗೆ ಬರವ ಮದಲು ಕೋವಿಡ್ ನ ಬಗ್ಗೆ ರಜ್ಜ ತಿಳ್ಕೊಂಡರೆ ಒಳ್ಳೆದು. ಈ ಪ್ರಪಂಚಲ್ಲಿ ಎಷ್ಟೋ ನಮೂನೆಯ ರೋಗಂಗ ಇದ್ದವು. ಕೆಲವು ರೋಗಂಗ ವೈರಸ್ಸಿಂದ, ಇನ್ನು ಕೆಲವು ಬ್ಯಾಕ್ಟೀರಿಯಂದ ಮತ್ತೆ ಕೆಲವು ಕ್ರಿಮಿಗಳಿಂದ ಬಕ್ಕು. ಮದಲು ಕೆಲವು ಸಾಂಕ್ರಾಮಿಕ ರೋಗಂಗೊ ಒಂದೊಂದು ಜಾಗೆಲಿ ಮಾಂತ್ರ ಬಂದೊಂಡಿತ್ತು. ಉದಾಹರಣೆಗೆ ಕಾಲೆರಾ, ಡೆಂಗ್ಯು, ಮಂಗನ ಖಾಯಿಲೆ ಹೀಂಗಿಪ್ಪದು. ಆದರೆ ಈ ಶತಮಾನದಲ್ಲಿ ಬಂದ ಹೊಸ ಪಿಡುಗು ಕಂಡು ಕೇಳರಿಯದ್ದು. ಇದು ವಿಶ್ವಕ್ಕೇ ಬಂದ ಮಹಾ ಪಿಡುಗು. ವೈರಸ್ಸಿಂದ ಬಪ್ಪ ಕಾರಣ ಬೇಗ ಹರಡುತ್ತು. ಈ ರೋಗ ಸುರುವಿಂಗೆ ಚೀನಾಲ್ಲಿ ಹುಟ್ಟಿದ್ದು. ಅದು 2019ರಲ್ಲಿ ಸುರುವಾದ ಕಾರಣ ವಿಶ್ವ ಸಂಸ್ಥೆ ಈ ರೋಗಕ್ಕೆ ಕೋವಿಡ್ 19 ಹೇಳಿ ಹೆಸರು ಮಡುಗಿತ್ತು. ಚೀನಂದ ವಿಶ್ವಕ್ಕೆ ರವಾನೆ ಅಪ್ಪಲೆ ತುಂಬಾ ದಿನ ಬೇಕಾಯಿದೇ ಇಲ್ಲೆ. ಎಂತಕೆ ಹೇಳಿದರೆ ಜನಂಗಳ ವಿಮಾನ ಪ್ರಯಾಣದೊಟ್ಟಿಂಗೆ ಕೊರೋನಾ ವೈರಸ್ಸೂ ಟಿಕೇಟಿಲ್ಲದ್ದೆ ಎಲ್ಲಾ ದೇಶಂಗೊಕ್ಕೆ ಪ್ರಯಾಣ ಬೆಳೆಸಿತ್ತು. ಚೀನಂದ ಎದೆನಡುಗುವ ವೀಡಿಯೋ ಬಪ್ಪಗ ಹೆದರಿಕೆ ಆತು. ಹಾಂಗಿಪ್ಪಗಳೇ ಫೆಬ್ರವರಿಲಿ ಭಾರತಕ್ಕೆ ಕಾಲು ಮಡುಗಿಯೇ ಬಿಟ್ಟತ್ತು ಈ ಮಹಾಮಾರಿ. ಅದು ಹರಡದ್ದಾಂಗೆ ಮಾಡುವುದು ಹೇಂಗೆ?

ಒಬ್ಬಕ್ಕೊಬ್ಬ ಹತ್ತರೆ ನಿಲ್ಲದ್ದರೆ ಆತು. ಮೂಗು ಬಾಯಿ ಮುಖಾಂತರ ದೇಹದ ಒಳ ಹೋಪ ಕಾರಣ ಅದರ ತಡೆಯೆಕು. ಸೆಮಿಲು ಬಪ್ಪಗ, ಮಾತಾಡುವಾಗ, ಸೆಮ್ಮುವಗ ಎಂಜಲು ಹಾರ್ತು. ಅಕಸ್ಮಾತ್ ರೋಗ ಇದ್ದವು ಹತ್ತರೆ ಇದ್ದು ಸೆಮ್ಮಿದರೆ ಪಕ್ಕಲ್ಲಿಪ್ಪವಕ್ಕೂ ಆ ರೋಗ ಹರಡುಗು. ಸಾಮಾನ್ಯವಾಗಿ ಕೈ ಬಾಯಿ ಮುಟ್ಟಿಹೋವುತ್ತು. ಅಷ್ಟಪ್ಪಗ ವೈರಸ್ ಕೈಗೆ ಅಂಟಿಯೊಳ್ತು. ಅದೇ ಕೈಲಿ ಬೇರೆಯವಕ್ಕೆ ಹಸ್ತಲಾಘವ ಮಾಡಿಯಪ್ಪಗ ಅವರ ಕೈಗೆ ವೈರಸ್ ರವಾನೆ ಆವುತ್ತು. ಹಾಂಗಾಗಿ ಇನ್ನೊಬ್ಬಂದ ಆರಡಿ ದೂರದೊಳ ನಿಂಬಲೇ ಆಗ. ಇನ್ನು ಪಾಶ್ಚಾತ್ಯರ ಕೈಕುಲುವ ಆಟಕ್ಕೆ ಅರಬರ ಆಲಿಂಗನಕ್ಕೆ ಎಲ್ಲಾ ಕಡಿವಾಣ ಬಿದ್ದತ್ತು. ಭಾರತೀಯ ಪದ್ಧತಿಯ ನಮಸ್ಕಾರವ ಎಲ್ಲರು ಅನುಸರುಸಲೆ ಸುರು ಮಾಡಿದವು. ಜನ ಬೆರಕ್ಕೆ ಅಪ್ಪದರ ನಿಲ್ಲುಸಲೆ 2020ರ ಮಾರ್ಚ್ 25ರಿಂದ ಭಾರತ ಸರ್ಕಾರ ಸಂಪೂರ್ಣ ಬಂದ್ ಹೇಳಿ ಪ್ರಕಟಿಸಿತ್ತು. ಇಡೀ ದೇಶ ಇಪ್ಪತ್ತೊಂದು ದಿನ ಲಾಕ್ಡೌನ್. ಮತ್ತೆ ಅದನ್ನೆ ಮುಂದುವರಿಸಿ ಮೇ 31ರ ವರೆಗೆ ಲಾಕ್ಡೌನ್. ಜೆನಂಗೊ ವಹಿಸಬೇಕಾದ ಜಾಗ್ರತೆಯ ಮಾಧ್ಯಮಂಗ ಸಾರಿ ಸಾರಿ ಪ್ರಚಾರ ಮಾಡಿದವು.ಎಲ್ಲರೂ ಸಾಮಾಜಿಕ ಅಂತರ,ಮುಖ ಕವಚ, ಹಾಕಲೆ ಕೈ ಶುದ್ಧ ಮಾಡಲೆ ಕಲ್ತೊಂಡವು. ಹೆರ ಹೋಯೆಕಾದರೆ ಸಾನಿಟೈಸರ್ ತೆಕ್ಕೊಂಡೇ ಹೋಯೆಕಾದ ಪರಿಸ್ಥಿತಿ ಬಂತು.

ಆದರೆ ಈ ಲಾಕ್ಡೌನಿನ ಪರಿಣಾಮ ಭೀಕರ. ಲಾಕ್ ಡೌನ್, ಬಂದ್ ಎಲ್ಲಾ ಅಪ್ಪಗ ಸಂಕಟ ಪಡುವವು ಕೆಲಸಗಾರರು, ವಲಸೆಗಾರರು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಲ್ಲಿಪ್ಪ ಹುಟ್ಟೂರಿಗೆ ಹೋಪಲೆ ವಾಹನ ಇಲ್ಲದ್ದೆ ಸಾವಿರಾರು ಮೈಲು ನಡಕ್ಕೊಂಡು ಹೋದ ವೀಡಿಯೋ ನೋಡ್ಲೆಡಿಯ. ಎಷ್ಟೋ ಜನ ಸತ್ತೂ ಹೋದವು. ಸತ್ತು ಹೋದವರ ದೇಹ ದಹನ ಕಾರ್ಯಕ್ಕೂ ಕುಟುಂಬಸ್ಥರಿಂಗೆ ಸಿಕ್ಕಿದ್ದಿಲ್ಲೆ. ಮಹಾನಗರಗಳಂದ ಗುಳೇ ಹೋಪ ವೀಡಿಯೋ ವಾಟ್ಸಪ್, ಫೇಸ್ಬುಕ್, ಮೀಡಿಯಾಗಳಲ್ಲಿ ಬಂದು ಜನಂಗೊಕ್ಕೂ ತಲೆಬೆಶಿಯಪ್ಪಲೆ ಸುರುವಾತು. ದೇಶಲ್ಲಿಪ್ಪವೂ ಪರದೇಶದಲ್ಲಿಪ್ಪವೂ ಅವರವರ ಊರಿಂಗೆ ಹಿಂದಿರುಗಲೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸರ್ಕಾರವೂ ವಿಮಾನಗಳ ಕಳುಹಿಸಿ ಹೆರದೇಶಲ್ಲಿಪ್ಪವರ ಸ್ವದೇಶಕ್ಕೆ ಬಪ್ಪಲೆ ಸಹಾಯ ಮಾಡಿತ್ತು. ಬಂದಪ್ಪಗ ಕ್ವಾರಂಟೈನ್ ಇರೆಕಾತು. ಆ ಸಮೆಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಪಲೆ ಜನಂಗ ಪರದಾಡಬೇಕಾತು. ಬಾಡಿಗೆ ವಾಹನದವು ಸಾಕಷ್ಟು ಪೈಸೆ ಮಾಡಿಯೊಂಡವು. ಗಡಿ ಭಾಗದ ಜನಂಗೊಕ್ಕೆ ತುಂಬಾ ತೊಂದ್ರೆ ಆತು. ಪ್ರಧಾನಮಂತ್ರಿ ಕೋವಿಡ್‌ ರೋಗಿಗಳ ಸೇವೆ ಮಾಡಿದವಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಲೆ ಹೇಳಿದವು. ಇದರ ಅರ್ಥ ಮಾಡಿಗೊಳದ್ದೆ ಕೆಲವು ಜನ ಚಪ್ಪಾಳೆ ತಟ್ಟಿದರೆ ಕೊರೊನಾ ಓಡಿಹೋಕಾ, ಹೇಳಿ ತಮಾಷೆ ಮಾಡಿದವು. ಶಂಖ, ಗಂಟೆ, ದೀಪ ಹೊತ್ತುಸುವ ಮುಖಾಂತರ ಇಡೀ ಭಾರತಲ್ಲಿ  ಕೊರೋನದ ಬಗ್ಗೆ ಜಾಗೃತಿ ಮೂಡಿಸಿದವು. ಕೊರೋನಾಕ್ಕೆ ಸಂಬಂಧ ಪಟ್ಟು ಜನರ ಸೇವೆ ಮಾಡಿದವಕ್ಕೆ ಕೋವಿಡ್ ವಾರಿಯರ್ಸ್ ಹೇಳಿ ಸರ್ಕಾರ ಹೆಸರು ಮಡುಗಿತ್ತು. ಕೆಲವು ಮೂರ್ಖಂಗೊ ಈ ವಾರಿಯರ್ಸ್ನ ಕಂಡರೆ ಓಡಲೆ ಸುರು ಮಾಡಿದರೆ ಇನ್ನು ಕೆಲವು ಜನ ಅವರನ್ನೇ ಬಡುದೋಡಿಸಿದವು.ಕೊರೊನದ ಬಗ್ಗೆ ಅಷ್ಟು ಹೆದರಿಕೆ ಹುಟ್ಟಿತ್ತು.

ಜನಜೀವನ ಹೇಂಗಿತ್ತು? ತಿಂಗಳಿಂಗೆ ಸರಿಯಾಗಿ ಸಂಬಳ ಬಪ್ಪ ಸರ್ಕಾರಿ ಉದ್ಯೋಗಿಗೊಕ್ಕೆ ಪೈಸೆಗೆ ತೊಂದರೆ ಇಲ್ಲೆ. ಆದರೆ ಖಾಸಗಿ ಸಂಸ್ಥೆಯಲ್ಲಿ ಕೆಲಸಮಾಡುವವಕ್ಕೆ , ದಿನಗೂಲಿ ಮಾಡುವವಕ್ಕೆ , ಆಟೋ, ಟ್ಯಾಕ್ಸಿ ಓಡುಸುವವಕ್ಕೆ , ಹೋಟೆಲಿನವಕ್ಕೆ,, ಗಾಡಿಯಲ್ಲಿ ವ್ಯಾಪಾರ ಮಾಡುವವಕ್ಕೆ ಜೀವನೋಪಾಯಕ್ಕೆ ಎಂತ ಮಾಡುವುದು? ಅದರಲ್ಲೂ ವಲಸೆ ಹೋದವರ ಕಷ್ಟ ಹೇಳಲೆಡಿಯದ್ದು. ಸರ್ಕಾರ ಬಡವರಿಂಗೆ ಐದು ಸಾವಿರ ತಲಾ ಕೊಟ್ಟತ್ತು. ಬಡವರಿಂಗೆ ದಿನಸಿ ,ಊಟ ಎಲ್ಲಾ ಕೊಟ್ಟತ್ತು. ಆರ್ ಎಸ್ ಎಸ್ ಹಾಂಗಿಪ್ಪ ಸಂಸ್ಥೆಗಳೂ ದಿನಸಿ ಕೊಟ್ಟವು. ಆದರೂ ಎಷ್ಟು ದಿನ ಕೊಡಲಕ್ಕು? ಇದರ ಮಧ್ಯೆ ಸರ್ಕಾರಕ್ಕೆ ಆದಾಯ ಇಲ್ಲದ್ದೆ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ ಹಿಡಿದು ಅವಕ್ಕೆ ಅಸಮಾಧಾನವೂ ಆತು. ಕೊರೋನಾ ವಾರಿಯರ್ಸಿಂಗೆ ಸಂಬಳವೂ ಸರಿ ಸಿಕ್ಕಿದ್ದಿಲ್ಲೆಡ. ಕೆಲವು ಕಾರ್ಖಾನೆಗೊ, ಗಾರ್ಮೆಂಟ್ ಫ್ಯಾಕ್ಟರಿಗೊ ಎಲ್ಲ ಸ್ಥಗಿತವಾದವು. ಐಟಿ ಕಂಪೆನಿಗೊ ಮನೆಂದಲೇ ಕೆಲಸ ಮಾಡ್ಲೆ ಉದ್ಯೋಗಿಗೊಕ್ಕೆ ಹೇಳಿದವು. ಶಾಲೆ, ಕಾಲೇಜುಗೊ ಬಂದ್ ಆದವು. ಮಕ್ಕೊಗೆ ಆನ್ಲೈನ್ ಕ್ಲಾಸ್ ಸುರುವಾತು. ಮಾರ್ಗಲ್ಲಿ ವಾಹನಂಗಳೂ ಇಲ್ಲೆ, ಜನಂಗಳೂ ಇಲ್ಲೆ. ಹಾಂಗಾರೆ ಜನರ ದಿನಚರಿಯಲ್ಲಿ ಎಂತಾ ಬದಲಾವಣೆ ಆತು ಹೇಳಿದರೆ ಜನಂಗೊಕ್ಕೆ ಮನೆ ಹೆರಡದ್ದೆ ಉದಾಸೀನ ಅಪ್ಪಲೆ ಸುರು ಆತು. ಪಂಜರಲ್ಲಿ ಮಡುಗಿದ ಗಿಳಿಯ ಅವಸ್ಥೆ ನೆಂಪಾತು.

ಹೆಮ್ಮಕ್ಕೊಗೆ ಅಡಿಗೆ ಮಾಡಿ ಸಾಕಾತು. ಎಂತಕೆ ಹೇಳಿರೆ ಸುಮ್ಮನೆ ಕೂಪಗ ಎಂತಾದರು ತಿಂಬಲೆ ಬಾಯಿ ಅರಸುತ್ತು.ಹಾಂಗಾಗಿ ತಿಂಬದು ಹೆಚ್ಚಾತು. ಅಂಬಗಂಬಗ ಕೈ ತೊಳವಲೆ ಸುರು ಮಾಡಿದವು ಜನಂಗ. ಸಾಮಾನು ಕಟ್ಟುಗಳ ಸಾನಿಟೈಸ್ ಮಾಡುದು ,ತರಕಾರಿಗಳ ಸಾಬೂನು ನೀರಿಂದ ತೊಳವದು ಎಲ್ಲಾ ದಿನಚರಿ ಆತು. ಮಕ್ಕಳ ಕೈಗೆ ಆನ್ಲೈನ್ ಪಾಠಂದಾಗಿ ಸ್ಮಾರ್ಟ್ ಫೋನ್ ಬಂತು. ಅದರಿಂದ ತೊಂದರೆಯೂ ಆತು. ಸ್ಮಾರ್ಟ್ ಫೋನಿಲ್ಲದ್ದ ಮಕ್ಕೊಗೆ ತುಂಬಾ ಕಷ್ಟ ಆತು. ಬಡವರತ್ರೆ ಪೈಸೆ ಇಲ್ಲದ್ದೆ ಬೇಜಾರಾಗಿ ಕೆಲವು ಮಕ್ಕ ಆತ್ಮಹತ್ಯೆಯನ್ನೂ ಮಾಡಿದವು. ಮತ್ತೆ ಕೆಲವಕ್ಕೆ ನೆಟ್ವರ್ಕ್ ಇಲ್ಲದ್ದೆ ತೊಂದರೆ ಆತು. ಹೆತ್ತೋರಿಂಗೂ ಮೋಬೈಲ್ ಟೀಚರ್ ಸ್ಥಾನ ತೆಕ್ಕೊಂಬಲೆ ಸಾಧ್ಯ ಇಲ್ಲೆ ಹೇಳಿ ಅರ್ಥ ಆತು. ಸರಿಯಾದ ಕೆಲಸ ಇಲ್ಲದ್ದೆ ಕಲ್ತವುದೆ ಕೃಷಿಯತ್ತ ಮುಖ ಮಾಡಿದವು.ಪೇಟೆ ಬಿಟ್ಟು ಹಳ್ಳಿಗೆ ಬಪ್ಪಲೆ ಸುರು ಮಾಡಿದವು. ಮದುವೆ ,ಉಪನಯನಂಗಳ ಸಣ್ಣಕೆ ಮಾಡಿ ಮುಗುಶಿದವು. ಇನ್ನು ಕೆಲವರ ಮುಂದೂಡಿದವು. ಟಿ ವಿ, ಪೇಪರುಗಳಲ್ಲಿ ಜನರ ಕಷ್ಟಂಗಳ ವರ್ಣನೆ, ಮಾನವೀಯತೆ ಇಲ್ಲದ್ದ ಆಸ್ಪತ್ರೆಗಳ ವಿಷಯಂಗಳ ತಿಳುದು ಆರೋಗ್ಯವೇ ಭಾಗ್ಯ ಹೇಳಿ ಜನಂಗ ಯೋಗ, ಧ್ಯಾನದ ಕಡೆಂಗೆ ಮೋರೆ ಮಾಡಿದವು. ಶಾಲೆ ಇಲ್ಲದ್ದೆಯೋ, ಸ್ವಚ್ಛತೆ ಹೆಚ್ಚಾದ್ದಕ್ಕೋ ಮಕ್ಕೊಗೆ ಜ್ವರ ಶೀತ ಎಂತದೂ ಇಲ್ಲದ್ದೆ ಕ್ಲಿನಿಕ್ ಮಡಿಕ್ಕೊಂಡಿಪ್ಪ ಡಾಕ್ಟರ್ ಗೊಕ್ಕೆ ರೋಗಿಗೊ ಇಲ್ಲದ್ದೆ ಆದಾಯ ಕಮ್ಮಿ ಆತು. ಸಣ್ಣ ಸಣ್ಣ ಅಂಗಡಿಗೊ ಮುಚ್ಚಿ ಹೋದವು. ಕೆಲವು ಜನ ಆತ್ಮ‌ಹತ್ಯೆಯನ್ನೂ ಮಾಡಿಕೊಂಡವು. ಪೇಟೆಯಲ್ಲಿ ಇಪ್ಪವಕ್ಕೆ ತುಂಬಾ ಕಷ್ಟ ಆದರೂ ಹಳ್ಳಿಯಲ್ಲಿ ಅದರ ಪರಿಣಾಮ ಅಷ್ಟು ಆಯಿದಿಲ್ಲೆ. ಮೊಬೈಲ್ ದೇಹದ ಭಾಗದ ಹಾಂಗೇ ಆಗ್ಯೋತು. ಅಂತರ್ಜಾಲದ ಉಪಯೋಗ ಹೆಚ್ಚಾತು.ಕೋವಿಡ್ ಬಗ್ಗೆ ತಿಳಿವಲೆ , ಆನ್ಲೈನ್ ವ್ಯವಹಾರ ಮಾಡಲೆ ಮೊಬೈಲನ್ನೇ ನಂಬುವ ಹಾಂಗಾತು.

ಆನ್ಲೈನ್ ವ್ಯಾಪಾರಂಗೊ ಹೆಚ್ಚಿತ್ತು. ಇನ್ನೊಂದು ಮುಖ್ಯ ಬದಲಾವಣೆ ಕಂಡದು ಹೇಳಿದರೆ ವಾಟ್ಸಪ್ ಬಳಗಂಗ , ಸಾಹಿತ್ಯ ಬಳಗಂಗ , ಫೇಸ್ಬುಕ್ ಬಳಗಂಗಳ ಸಂಖ್ಯೆ ಹೆಚ್ಚಿದ್ದು. ಈ ಬಳಗಂಗಳಲ್ಲಿ ದಿನದಿನಾ ಸ್ಪರ್ಧೆಗಳ ಮಡುಗುವುದರಿಂದ ಜನರ ಸಾಹಿತ್ಯ ಅಭಿರುಚಿ ಯೊಂದಿಗೆ ಬರವಣಿಗೆಯೂ ಬೆಳವಣಿಗೆಯ ಕಂಡ ಬಂದತ್ತು. ಹೋಟೆಲಿಂಗೆ ಹೋಪದು ಕಮ್ಮಿಯಾದ ಕಾರಣ ಮನೆ ಊಟವನ್ನೆ ಉಂಬಲೆ ಸುರು ಮಾಡಿದ ಕಾರಣ ಹೆಮ್ಮಕ್ಕಳ ಪಾಕ ಪ್ರಯೋಗಂಗಳೂ ಹೆಚ್ಚಿದ್ದು ಫೇಸ್ಬುಕ್ಕಿನ ಪೋಸ್ಟುಗಳ ನೋಡುವಗ ಗೊಂತಾತು. ಮದುವೆ ಉಪನಯನಂಗಳ ಎಲ್ಲಾ ಮುಂದಕ್ಕೆ ಹಾಕಿ ಹಾಕಿ ಅಕೇರಿಗೆ ಸಣ್ಣ ಕ್ಕೆ ಮುಗುಶಿದವು. ಹುಟ್ಟು ಹಬ್ಬವೂ ಇಲ್ಲೆ, ವಾರ್ಷಿಕೋತ್ಸವವೂ ಇಲ್ಲೆ. ಹಬ್ಬವೂ ಸರಿ ಆಚರಿಸಲೆಡಿಗಾಯಿದಿಲ್ಲೆ. ಅದ್ದೂರಿಯ ಮದುವೆ ಮಾಡಿಗೊಳೆಕು ಹೇಳಿ ಆಸೆ ಪಟ್ಟವಕ್ಕೆ ನಿರಾಶೆ ಆತು. ಒಂದು ಮದುವೆಯೋ, ಸಮಾರಂಭವೋ ಆದರೆ ಎಷ್ಟು ಜೆನಕ್ಕೆ ಆದಾಯ ಆವುತ್ತು!

ಸೀರೆ ,ವಸ್ತ್ರ, ಹೂಗು, ಅಡಿಗೆ, ಫೋಟೋ, ಸಭಾಂಗಣ ಹೀಂಗೆ ಒಂದಕ್ಕೊಂದು ಹೊಂದಿಕೊಂಡಿಪ್ಪಗ ಅದನ್ನೆ ನಂಬಿ ಕೆಲಸ ಮಾಡುವವರ ಪಾಡು ಆರಿಂಗೂ ಬೇಡ. ಜನಂಗ ರಜ್ಜ ಸರಳ ಜೀವನ ಮಾಡ್ಲೆ ಸುರು ಮಾಡಿದವು. ಅದು ಅನಿವಾರ್ಯ ವೂ ಆಗಿತ್ತು. ಪ್ರವಾಸ ಹೋಪದು ಕಮ್ಮಿ ಆತು.ಜೀವ ಇದ್ದರೆ ಜೀವನ.ಆಡಂಬರ ಎಲ್ಲಾ ಮತ್ತೆಯೆ. ಕೆಲವು ಕ್ರಿಕೆಟ್ ಪಂದ್ಯಗಳನ್ನೇ ನಿಲ್ಲಿಸಿದರೆ ಇನ್ನು ಕೆಲವು ಆಟಂಗಳ ಪ್ರೇಕ್ಷಕರಿಲ್ಲದ್ದೆಯೇ ನಡೆಸಿದವು. ಈ ವರ್ಷದ ಸುರುವಿಂಗೆ ಕೊರೊನದ ಕಾಟ  ರಜ ಕಮ್ಮಿ ಆತು ಹೇಳಿಯಪ್ಪಗ ಜಂಬ್ರಂಗೊ ಸಮ್ಮೇಳನಂಗೊ ಹೆಚ್ಚಾದವು. ಜನಂಗೊಕ್ಕೆ ಹೆದರಿಕೆ ಕಮ್ಮಿ ಆಗಿ‌ ಕೋವಿಡ್ ನಿಯಮ ಮುರಿವಲೆ ಸುರು ಮಾಡಿದವು. ಕಾನೂನು ಇಪ್ಪದೇ ಮುರಿವಲೆ ಅಲ್ಲದ. ಪೋಲೀಸುಗೊ ದಂಡ ಹಾಕಿದರೂ ಜನಂಗೊಕ್ಕೆ ಬುದ್ಧಿ ಬಯಿಂದಿಲ್ಲೆ. ಆದರೂ ಸಿನೆಮಾ ಥಿಯೇಟರುಗೊ, ಜಿಮ್ ಗೊ, ಕಾಲೇಜುಗೊ ಪ್ರಾರಂಭ ಮಾಡಿದ್ದವಿಲ್ಲೆ. ಜನಂಗಳ ಒತ್ತಾಯ ಹೆಚ್ಚಾತು. ಮತ್ತೆ ಕಾಲೇಜು, ಥಿಯೇಟರ್ ಪ್ರಾರಂಭ ಮಾಡಿದವು. ಜನಂಗಳ ಸಸಾರ ಹೆಚ್ಚಾತು. ಮತ್ತೆ ಸುರುವಾತದ ಕೋವಿಡಿನ ಎರಡನೆ ಅಲೆ. ಸುರುಗಾಣ ಅಲೆಯ ಪರಿಣಾಮಂಗಳ ನೋಡಿಯಪ್ಪಗಳೇ “ಈ ಜೀವನ ಶಾಶ್ವತ ಅಲ್ಲ. ರೋಗಕ್ಕೆ ಬಡವ ಬಲ್ಲಿದ ಹೇಳ್ತ ತಾರತಮ್ಯ ಇಲ್ಲೆ ” ಹೇಳ್ತದು ಜನಂಗೊಕ್ಕೆ ಅರ್ಥ ಆಯಿದು.

ಈ ಎರಡ್ನೆ ಅಲೆ ಇನ್ನೂ ಭೀಕರ. ಸಣ್ಣಪ್ರಾಯದವರನ್ನೂ ಬಲಿ ತೆಕ್ಕೊಳ್ತು. ಇದು ಸದ್ಯಕ್ಕೆ ನಿಲ್ಲುವ ಹಾಂಗೆ ಕಾಣ್ತಿಲ್ಲೆ. ಲಸಿಕೆ ಬಯಿಂದು. ಆದರೆ ಸುರುವಿಂಗೆ ಹಾಕಿಸಿಯೊಂಬಲೆ ಜೆನಂಗೊ ಮನಸ್ಸು ಮಾಡಿದ್ದವಿಲ್ಲೆ. ಈಗ ಎಲ್ಲೋರಿಂಗೂ ಬೇಕು. ಲಸಿಕೆಯ ಕೊರತೆಯೂ ಇದ್ದು. ಅದರ ಕಳ್ಳಸಾಗಾಟ, ಆಮ್ಲಜನಕ, ಮದ್ದಿನ ಕಳ್ಳಸಾಗಾಟವೂ ಆವುತ್ತಾ ಇದ್ದು. ಅರ್ಧ ಸಂಕಷ್ಟ ಕೊರೋನಾಂದ ಅಲ್ಲ ಈ ಸ್ವಾರ್ಥ ಜನರ ದುರಾಸೆಯಿಂದಲೇ ಹೇಳಲೆ ಅಕ್ಕು. ಒಟ್ಟಾರೆ ಹೇಳೆಕಾರೆ ಕೊರೊನಾ ಹಿಂದಾಣ ಪರಿಸ್ಥಿತಿ ಬಪ್ಪ ಲಕ್ಷಣ ಕಾಣ್ತಾ ಇಲ್ಲೆ. ಈಗ ಹಣ ಎಣುಸುವ ಬದಲು ಹೆಣ ಎಣುಸುವ ಪರಿಸ್ಥಿತಿ. ಸ್ಮಶಾನಕ್ಕೂ ಸರತಿಯ ಸಾಲು ಹೇಳಿದರೆ ಅವಸ್ಥೆಯ ಗಂಭೀರತೆ ಅರ್ಥ ಅಕ್ಕು. ಹೀಂಗಿಪ್ಪಗ ಸಾಮಾನ್ಯ ಜನಜೀವನ ಬಪ್ಪದು ಹೇಂಗೆ? ಸರಕಾರಕ್ಕೂ ಎಂತಾ ಮಾಡುವುದು ಹೇಳಿ ಅರ್ಥ ಆವುತ್ತಿಲ್ಲೆ. ಎರಡೆರಡು ಮಾಸ್ಕ್ ಹಾಕೆಕಾದ ಪರಿಸ್ಥಿತಿ ಇಪ್ಪಗ ಈ ಕೋವಿಡ್ ಕೊಡುಗೆಯೊಟ್ಟಿಂಗೆಯೇ ಬದುಕೆಕ್ಕು.
 ✍️ಪರಮೇಶ್ವರಿ ಭಟ್

4 thoughts on “ಪ್ರಬಂಧ ಪ್ರಥಮ – ಕೋವಿಡ್ ನಂತರದ ಜೀವನ ಶೈಲಿ

  1. ಹೃತ್ಪೂರ್ವಕ ಧನ್ಯವಾದಂಗ ಮುಳಿಯದಣ್ಣಂಗೆ
    ಎನ್ನ ಪ್ರಬಂಧವ ಮೆಚ್ಚಿದ್ದಕ್ಕೆ 🙏

  2. ಉತ್ತಮ ಗುಣಮಟ್ಟದ ಬರವಣಿಗೆ.ಲೇಖಕಿಗೆ ಅಭಿನಂದನೆಗೊ.

    1. ಹೃತ್ಪೂರ್ವಕ ಧನ್ಯವಾದಂಗ ಮುಳಿಯದಣ್ಣಂಗೆ
      ಎನ್ನ ಪ್ರಬಂಧವ ಮೆಚ್ಚಿದ್ದಕ್ಕೆ 🙏

      1. ಅಭಿನಂದನೆಗೊ. ಲಾಯಕಿತ್ತು ಪ್ರಬಂಧ. ವಿಷಯ ಮಂಡನೆ ಸೂಪರ್ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×