Oppanna.com

ಸ್ವಯಂವರ ಭಾಗ 49-ಪ್ರಸನ್ನಾ ವಿ ಚೆಕ್ಕೆಮನೆ

ಸ್ವಯಂವರ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   18/05/2020    4 ಒಪ್ಪಂಗೊ

ಸ್ವಯಂವರ ಭಾಗ 49

“ಈ ಕೂಸಾರು ಡಾಕ್ಟರೇ…? ” ಆ ಅಜ್ಜಿ ಇವರ ಹತ್ತರೆ ಕುರ್ಚಿ ಎಳದು ಕೂದುಕೊಂಡವು.

ಸುಪ್ರಿಯ ಎಂತಕೆ ಅಷ್ಟು ಗಟ್ಟಿಯಾಗಿ ಕೈ ಹಿಡುದ್ದು ಹೇಳಿ ಸುದೀಪಂಗೆ ಗೊಂತಾಗದ್ರೂ ಗುರ್ತ ಇಲ್ಲದ್ದ ಮನಗೆ ಬಂದಪ್ಪಗ ಒಂದು ರೀತಿಯ ಹೆದರಿಕೆ ಆದ್ದಾದಿಕ್ಕು ಗ್ರೇಶಿದ. ಹೆದರೆಡ ಹೇಳಿ ಅದರ ಕೈಗೆ ಮೆಲ್ಲಂಗೆ ತಟ್ಟಿ ಧೈರ್ಯ ಹೇಳಿಕ್ಕಿ ಆ ಅಜ್ಜಿ ಹತ್ರೆ ಮಾತಾಡ್ಲೆ ಸುರು ಮಾಡಿದ‌. ಅವಕ್ಕೆ ಇವನ ಮೇಗೆ ಎಷ್ಟು ಪ್ರೀತಿ ಇದ್ದೂಳಿ ಅವರ ಮಾತಿಲ್ಲಿ ಗೊಂತಾಗಿಂಡಿದ್ದತ್ತು.

ಸುಪ್ರಿಯನ ಗುರ್ತ ಹೇಳಿಯಪ್ಪಗ ಅವರ ಮೋರೆಲಿ ಸಣ್ಣಕೆ ನೆಗೆ ಬಂತು.
“ಆನೆಂತಕೆ ಇಷ್ಟು ಮಾತಾಡ್ತೆ ಹೇಳಿ ಆವ್ತ ಅಬ್ಬೋ..ಎನ್ನ ಜೀವ ಒಳುಶಿದ ಡಾಕ್ಟರ ಇವ. ಬೇರೆ ಬೇರೆ ಆಸ್ಪತ್ರಗೆ ಹೋಗಿ ಎಷ್ಟು ಮದ್ದು ಮಾಡಿರೂ ಗುಣಾಗದ್ದ ಹೊಟ್ಟೆ ಬೇನೆ ಇವರ ಮದ್ದಿಲ್ಲಿ ಗುಣಾದ್ದೆನಗೆ. ಹಾಂಗಾಗಿ ದೇವರ ಹಾಂಗೆ…..”

“ನಿಂಗೊಗೆ ಗುಣಪ್ಪ ಯೋಗ ಇದ್ದತ್ತು,ಗುಣಾತು.ಅದಕ್ಕೆ ಆನು ಬರೀ ನಿಮಿತ್ತ ಮಾತ್ರ” ಸುದೀಪ ಹೇಳಿದ್ದು ಸುಪ್ರಿಯಂಗೆ ತುಂಬ ಇಷ್ಟಾತು.

“ಶೈಲಾ ಇಲ್ಲಿ ಬಾ….ಡಾಕ್ಟರಿಂಗೆ ಗುರ್ತ ಮಾಡ್ತೆ” ಹೇಳಿಯಪ್ಪಗ ಆಗ ಜೀಪಿಲ್ಲಿ ಬಂದ ಹೆಮ್ಮಕ್ಕೊ ಹೆರ ಬಂತು.
ಒಂದು ಹೊಡೆಂದ ನೋಡುಗ ಥೇಟ್ ವಿಜಯನ ವಜಾಯವೇ. ‘ಹುಡ್ಕಿದ ಬಳ್ಳಿ ಕಾಲಿಂಗೆ ಸುಂದಿತ್ತು’ ಹೇಳಿ ಒಂದು ಗಾದೆ ಇಪ್ಪ ಹಾಂಗಾತೋ ಇದು. ಸುಪ್ರಿಯನ ಎದೆ ಬಡಿತ ಏರಿತ್ತು. ಮೋರೆ ಎಲ್ಲ ಬೆಗರಿತ್ತು.

“ನೀನೆಂತ ಮಾಡ್ತಾಯಿದ್ದೆ” ಅದು ಸುಪ್ರಿಯನ ಹತ್ತರೆ ಕೂದತ್ತು.
“ನಿಂಗೊ ಟೀಚರಾ ?” ಕೇಳಿತ್ತು ಸುಪ್ರಿಯ ಅವು ಕೇಳಿದ ಪ್ರಶ್ನೆಗೆ ಉತ್ತರ ಕೊಡದ್ದೆ..

“ನಿನ್ನ ಪ್ರಶ್ನೆ ಕೇಳುಗಳೇ ನೀನು ಟೀಚರು ಹೇಳಿ ನಿನ್ನ ಇಷ್ಟರವರೆಗೆ ನೋಡದ್ದವಕ್ಕೆ ಸಾನು ಬೇಗ ಅಂದಾಜಾವ್ತದಾ..” ಅಜ್ಜಿ ನೆಗೆ ಮಾಡಿಯಪ್ಪಗ ಸುಪ್ರಿಯಂಗು ನೆಗೆ ಬಂತು.

“ಬನ್ನಿ ಆಸರಿಂಗೆ ಕುಡಿವ” ಒಳಾಂದ ಒಂದು ಹೆಮ್ಮಕ್ಕೊ ದಿನಿಗೇಳಿದವು.
“ಇವು ಕೇಶವಣ್ಣನ ಹೆಂಡತಿ” ಸುದೀಪ ಹೇಳಿಯಪ್ಪಗ ಸುಪ್ರಿಯ ಅಲ್ಲಿ ಎದುರು ಇಪ್ಪ ಪಟವ ಮತ್ತೊಂದರಿ ನೋಡಿತ್ತು.
ಅಬ್ಬೆ ಅಪ್ಪ, ಮೂರು ಜೆನ ಮಕ್ಕೊ ಇಪ್ಪ ಹಳೆಕಾಲದ ಕಪ್ಪು ಬಿಳಿ ಪಟ ಅದು.

“ಗುರ್ತ ಸಿಕ್ಕುತ್ತಾ ಇವರ? ಇದು ಇವ್ವೇ ಇಬ್ರು.ಶೈಲನೂ,ಕೇಶವನೂ..ಜೋಡು ಮಕ್ಕೊ ಇವು” ಅಜ್ಜಿ ಅಷ್ಟು ಹೇಳಿಯಪ್ಪಗ ಸುಪ್ರಿಯಂಗೆ ಕೈಕಾಲು ನಡುಗುಲೆ ಸುರುವಾತು. .
ನಿನ್ನೆಂದ ಆರ ಹುಡ್ಕಿಂಡಿತ್ತಿದ್ದನೋ ಅವ್ವೇ ಈಗ ಕಣ್ಣೆದುರು!! ಇವು ಇಷ್ಟು ಹತ್ತರೇ ಅವೆಲ್ಲ ಇತ್ತಿದ್ದವೋ….ಗ್ರೇಶುಗಳೇ ಒಂದು ರೀತಿಯ ರೋಮಾಂಚನ!!

“ಈ ಕೂಸಾರು?” ಕೇಳಿದ್ದು ಸುದೀಪ.
ಅಕ್ಕನ ಅಣ್ಣನ ನಡುಕೆ ನಿಂದೊಂಡಿಪ್ಪ ಸುಮಾರು ಹತ್ತು ವರ್ಷದ ಕೂಸು. ಎರಡು ಜಡೆ ಕಟ್ಟಿ ಹಬ್ಬಲ್ಲಿಗೆ ಸೂಡಿದ್ದು. ಮೊಳಪ್ಪಿಂದ ಕೆಳ ವರೆಗೆ ಇಪ್ಪ ಲಂಗ ರವಕೆ ಹಾಕಿದ ಚೆಂದದ ಕೂಸಿನ ಒಂದರಿ ನೋಡಿರೆ ಮತ್ತೊಂದರಿ ನೋಡೆಕೂಳಿ ಆಗಿಂಡಿತ್ತು. ಅಷ್ಟು ಆಕರ್ಷಣೆ ಆ ಕೂಸಿನ ಹಳೇ ಪಟಲ್ಲಿ ಕಾಂಬಗ ಕೂಡ ಆಗಿಂಡಿದ್ದತ್ತು‌ .

“ಸು…ಶೀ…..ಲಾ…” ಸುಪ್ರಿಯನ ಬಾಯಿಂದ ಸಣ್ಣಕೆ ಬಂದ ಸ್ವರ ಸುದೀಪಂಗೆ ಕೇಳಿತ್ತು. ಅವಂಗೆ ಆಶ್ಚರ್ಯ ಆಗಿ ಅದರ ನೋಡಿದ
“ನಿನಗಿವರ ಮದಲೇ ಗೊಂತಿದ್ದಾ?”
ಅದು ಇಲ್ಲೆ” ಹೇಳಿ ತಲೆ ಆಡ್ಸಿತ್ತು.
“ಎಲ್ಲ ಮತ್ತೆ ಹೇಳ್ತೆ ಈಗೆಂತ ಕೇಳೆಡ” ಹೇಳಿ ಸಣ್ಣಕೆ ಅವಂಗೆ ಮಾತ್ರ ಕೇಳುವ ಹಾಂಗೆ ಹೇಳಿತ್ತು.
ಇದೆಂತ ಕತೆ ಹೇಳಿ ಅವಂಗೆ ಮತ್ತೂ ಆಶ್ಚರ್ಯ ಆತು.

“ಎನ್ನ ಸಣ್ಣ ಮಗಳು. ಎನಗೆ ಮೂರು ಜನ ಮಕ್ಕೊ ” ಆ ಅಜ್ಜಿ ಪಟ ನೋಡಿಂಡು ದೊಡ್ಡಕೆ ಉಸಿಲು ಬಿಟ್ಟು ಒಂದರಿ ಸೆರಗಿಲ್ಲಿ ಕಣ್ಣುದ್ದಿದವು.

“ಈಗ ಹಳೇ ವಿಶಯ ಎಲ್ಲ ಮರೆಕು ಅತ್ತೇ.ಅವರ ಎದುರಂದ ಎಂತರ ಕಣ್ಣೀರು ಹಾಕುದು?” ಸೊಸೆ ಹೇಳಿಯಪ್ಪಗ ಆ ಅಜ್ಜಿ ತಲೆ ಆಡ್ಸಿದವು.

“ನಿನಗೆ ಗೊಂತಿಲ್ಲೆ. ಆನು ಈಗ ಬದ್ಕುದು ಸಾವಂದ ಮದಲು ಒಂದರಿಯಾದರೂ ಎನ್ನ ಮಗಳ ,ಪುಳ್ಯಕ್ಕಳ ನೋಡೆಕೂಳಿ.ಆ ಆಶೆ ಇಲ್ಲದ್ರೆ ಆನೆಂದೋ ಸಾಯ್ತಿತೆ”

ಸುದೀಪಂಗೆ ಮತ್ತೂ ಆಶ್ಚರ್ಯ ಆತು. ಅವು ಹೇಳುದು ಕೇಳುಗ ಅವರ ಮಗಳು ಇಲ್ಲಿಗೆ ಬತ್ತಿಲ್ಲೆ. ಆದರೆ ಇಷ್ಟರವರೆಗೆ ಇವರ ಗೊಂತಿಲ್ಲದ್ದ ಸುಪ್ರಿಯಂಗೆ ಹೇಂಗೆ ಆ ವಿಶಯ ಗೊಂತಾದ್ದು.

“ಇದಾ..ಕಾಪಿ ಮಾಡಿದೆ. ಡಾಕ್ಟರ್ ಕಾಪಿ ಕುಡಿತ್ತೀರನ್ನೇ” ಅವರ ಸೊಸೆ ಕಾಪಿಯುದೆ,ಒಂದು ತಟ್ಟೆಲಿ ಎಂತೋ ಸುಮಾರು ತಿಂಡಿಗಳನ್ನು ತಂದು ಮಡುಗಿತ್ತು.

“ನೀನುದೆ ತೆಕ್ಕೋ..ದಾಕ್ಷಿಣ್ಯ ಮಾಡೆಡ” ಹೇಳಿ ಶೈಲನುದೆ ಸುಪ್ರಿಯನ ಕೈಗೆ ಕಾಪಿ ತೆಗದು ಕೊಟ್ಟತ್ತು.

“ಇವರ ಮಗಳ ಕೊಟ್ಟದು ಚಿಕ್ಕಮ್ಮನ ಭಾವನೋರ ಹೆಂಡತಿಯ ಅಣ್ಣನ ಮಗಂಗೆ” ಶೈಲನ ತೋರ್ಸಿಂಡು ಹೇಳಿದ ಸುದೀಪ.

“ಯಾವ ಚಿಕ್ಕಮ್ಮನ….!?” ಸುಪ್ರಿಯ ಆಲೋಚನೆ ಮಾಡಿತ್ತು.
“ನಿನ್ನ ಪುಟ್ಟತ್ತೆ… ಈಗ ಗೊಂತಾತ” ಅವ ನೆಗೆ ಮಾಡಿಯಪ್ಪಗ ಸುಪ್ರಿಯಂಗೂ ನೆಗೆ ಬಂತು.

“ಶೈಲನ ಮಗಳು ಎನ್ನ ಸಣ್ಣ ಮಗಳ ಮಗಳಿಂದ ಒಂದೂವರೆ ವರ್ಷಕ್ಕೆ ದೊಡ್ಡ ಅಷ್ಟೇ” ಅಜ್ಜಿಗೆ ಸಣ್ಣ ಮಗಳ ನೆಂಪಾತು.

ಸುಪ್ರಿಯ ಅವರ ಬಾಯಿಂದ ಎಂತ ಬತ್ತು ಹೇಳಿ ಕಾದು ಕೂದತ್ತು. ಹೇಂಗಾರು ಆ ಸುಶೀಯೇ ಇವರ ಮಗಳು ನಿಗಂಟು. ಪುಟ್ಟತ್ತೆಗೆ ವಿಜಯನ ಕಂಡಪ್ಪಗ ಎಲ್ಲಿಯೊ ಕಂಡ ಹಾಂಗಾದ್ದು ,ಅದಕ್ಕೂ ಇವರ ಮಗಳ ಸಾಜ ಇಕ್ಕು. ಅಬ್ಬಾ….ದೇವರೇ….ನೀನು ಹೇಂಗೆಲ್ಲ ಆಟ ಆಡ್ತೆ!!

ಕೇಶವ,ಶೈಲ ಇಬ್ರನ್ನೂ ಕಂಡಾತು. ಆದರೆ ಸುಶೀಲಂಗೆ ಎಂತಾದ್ದು? ಅದೆಲ್ಲಿಗೆ ಹೋಯಿದು? ವಿಜಯಂಗೂ ಸುಶೀಲಂಗೂ ಎಂತ ಸಂಬಂಧ!
ಕೇಶವ ವಿಜಯನ ಮಾವ ಆದಿಕ್ಕಾ. ಹಾಂಗಿದ್ದರೆ ಇದೇ ಊರಿಲ್ಲಿ ಇದ್ದರೂ ಗೊಂತಾಗದ್ದೇಕೆ……ಹೀಂಗಿದ್ದ ಆಲೋಚನೆಗೊ ತಲೆಯೊಳ ತುಂಬ್ಸಿಂಡು ನಿದಾನಕೆ ಕಾಪಿ ಕುಡುದತ್ತು.

“ಅಬ್ಬಗೆ ಹಳೇ ನೆಂಪುಗೊ ಮರವಲೆ ಎಡಿತ್ತಿಲ್ಲೆ ಡಾಕ್ಟರೇ. ಹಾಂಗೆ ಅವಕ್ಕೆ ಯೇವಗಳೂ ಒಂದಲ್ಲದ್ರೆ ಒಂದು ಅಸೌಖ್ಯ. ಹಾಂಗೆ ಹೇಳಿ ದೊಡ್ಡ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡ್ಸಿಯಪ್ಪಗ ಎಂತದೂ ಇಲ್ಲೆ” ಶೈಲ  ಅಬ್ಬೆಯ ನೋಡಿಂಡು ಹೇಳಿತ್ತು.

“ಕೆಲವೆಲ್ಲ ಮರವಲೇ ಬೇಕು ಅತ್ತೇ.ಯಾವಗಲೂ ಬೇಜಾರ ಮಾಡಿಂಡಿಪ್ಪದಲ್ಲ. ಬದುಕು ಒಂದು ಚಕ್ರದ ಹಾಂಗೆ ಹೇಳಿ ಅಲ್ಲದ ಮದ್ಲಾಣವು ಹೇಳುದು. ಈ ಪ್ರಾಯಲ್ಲಿ ಹೆಚ್ಚು ತಲೆಬೆಶಿ ಮಾಡದ್ದೆ,ಮಕ್ಕೊ ಪುಳ್ಯಕ್ಕಳೊಟ್ಟಿಂಗೆ ಕೊಶೀಲಿ ಇರಿ” ಸುದೀಪ  ಹೇಳಿದ.

“ಎನ್ನ ಕತೆ ನಿಂಗೊಗೆ ಗೊಂತಿಲ್ಲೆ ಡಾಕ್ಟರೇ. ಆನೊಂದು ದೊಡ್ಡ ತಪ್ಪು ಮಾಡಿದ್ದೆ. ಆ ಬೇನೆ ಮನಸಿಂದ ಹೋಗ. ಎನ್ನ ಮಗಳು….ಎನ್ನ ಸುಶೀ…..” ಅವರ ಕೆಪ್ಪಟೆಲಿ ಕಣ್ಣೀರ ಧಾರೆ ಹರಿವದು ಕಾಂಬಗ ಸುದೀಪಂಗೆ ಸುಮ್ಮನೆ ಆತು.

“ಅತ್ತೆ ನಿಂಗೊ ಹಿರಿಯರು. ಎನ್ನ ಮಾತಿಂದ ಎಂತಾರು ತಪ್ಪಾಗಿದ್ದರೆ ಕ್ಷಮಿಸೆಕು” ಅವ ಬಗ್ಗಿ ಅವರ ಕಾಲು ಹಿಡಿವಲೆ ಹೋದ°. ಅವನ ಮಾತಿಂದಾಗಿ ಅವಕ್ಕೆ ಬೇಜಾರಾದ್ದೂಳಿ ಆತವಂಗೆ.

“ಛೇ…ಎಂತ ಇದು! ಆನು ಬೇಜಾರಾವ್ತು ಹೇಳಿದ ವಿಶಯ ನಿಂಗೊಗೆ ಗೊಂತಿಲ್ಲೆ ಡಾಕ್ಟರೇ.ಅದು ಎನ್ನದೇ ತಪ್ಪಿಂದಾಗಿ ಆದ ಬೇಜಾರ. ಕೇಶವಂಗೆ ಈಗಲೂ ಆ ದುಃಖ ಮನಸ್ಸಿಂದ ಹೋಯಿದಿಲ್ಲೆ. ಎಷ್ಟು ಕಷ್ಟ ಪಟ್ಟಿದ ಅವ”

“ಆತು ಈಗ ಆ ವಿಶಯ ಬಿಡಿ ಅತ್ತೇ. ಅವು ಅಪರೂಪಕ್ಕೆ ಬಂದದು ಮನಗೆ.ಅಷ್ಟಪ್ಪಗ ನಿಂಗಳ ಹಳೇ ಕತೆ ಹೇಳಿರೆ ಅವಕ್ಕೆ ಅರ್ಥವೂ ಆಗ. ಈಗ ಹೇಳಿ ಎಂತ ಪ್ರಯೋಜನವೂ ಇಲ್ಲೆ” ಸೊಸೆ ಅಷ್ಟು ಹೇಳಿಯಪ್ಪಗ ಅಜ್ಜಿಗೆ ರಜ ಅಸಮಾಧಾನ ಆತು

“ಆತಪ್ಪಾ..ಆನೆಂತ ಹೇಳ್ತಿಲ್ಲೆ. ನಿಂಗಳೇ ಮಾತಾಡಿಕೊಳ್ಳಿ. ಈ ಮುದಿಕೊರಂಟಿನ ಮಾತು ಈಗ ಆರಿಂಗೂ ಕೇಳೆಡ. ಆರತ್ರೂ ಹೇಳಿ ಪ್ರಯೋಜನ ಇಲ್ಲೆ….ಹ್ಹೂಂ…..” ಹೇಳಿಂಡು ಅಲ್ಲಿಂದ ಎದ್ದವು.

“ಎಂಗಳೂ ಹೆರಡ್ತೆಯ ಇನ್ನು,ಈಗ ಮಾರ್ಗ ಸರಿಯಾದಿಕ್ಕು” ಸುದೀಪ ಅವರತ್ರೆ ಹೇಳಿ ಹೆರಡ್ಲೆ ಎದ್ದು ನಿಂದ.
“ಇಲ್ಲೆ ಡಾಕ್ಟರೇ..ಇನ್ನೂ ಮಾರ್ಗ ಸರಿ ಆಯಿದಿಲ್ಲೇಡ.ಅದು ಟ್ಯಾಂಕರ್ ಬಿದ್ದದಲ್ದಾ.ಅಷ್ಟು ಬೇಗ ಸರಿಯಾಗ.ನಾಲ್ಕು ಗಂಟೆ ಆದರೂ ಆತು. ನಿಂಗೊ ಈಗ ಹೆರಡುದು ಬೇಡ” ಹೆರ ಆಳುಗಳ ಒಟ್ಟಿಂಗೆ ಮಾತಾಡಿಂಡಿದ್ದ ಕೇಶವಣ್ಣ ಬಂದು ಹೇಳಿಯಪ್ಪಗ ಸುದೀಪಂಗೆ ಎಂತ ಮಾಡುದೂಳಿ ಆತು.

ಮದಾಲು ಸುರೇಶಂಗೆ ಪೋನು ಮಾಡಿ ವಿಶಯ ತಿಳಿಶಿಕ್ಕಿ ಸುಪ್ರಿಯನ ಮನಗೆ ವಾಪಾಸು ಕರಕ್ಕೊಂಡು ಹೋವ್ತೆ’ ಹೇಳಿದ. ಅವ ಅತ್ಲಾಗಿಂದ ಎಂತೋ ಕುಶಾಲು ಮಾತಾಡಿರೂ ಸುದೀಪಂಗೆ ಸರಿಯಾಗಿ ಉತ್ತರ ಕೊಡದ್ದೆ ಸುಮ್ಮನೆ ನೆಗೆ ಮಾಡಿದ.

ಅಷ್ಟಪ್ಪಗ ಸುದೀಪನ ಅಪ್ಪನೂ ಪೋನು ಮಾಡಿದವು.
“ಅಲ್ಲೆಲ್ಲ ಮಾರ್ಗ ಬಂದಾಯಿದಾಡ, ಹೋಪಲೆಡಿಯದ್ರೆ ಆ ಕೂಸಿನ ಕರಕ್ಕೊಂಡು ಮಾರ್ಗದ ಕರೇಲಿ ನಿಲ್ಲೆಡ. ಮನಗೆ ಬನ್ನಿ ಇಬ್ರೂದೆ”
“ಆತಪ್ಪಾ..ಈಗ ಬತ್ತೆಯ°. ಎಂಗೊ ಒಬ್ಬರ ಮನೆಲಿದ್ದೆಯ” ಹೇಳಿಕ್ಕಿ ಪೋನು ಮಡುಗಿದ°.

ಸುಪ್ರಿಯ ನಿನ್ನೆಂದಲೋ ಎಂತೋ ಹೇಳ್ಲಿದ್ದೂಳಿ ಹೇಳಿರೂ ಅದರತ್ರೆ ಸರಿಯಾಗಿ ಮಾತಾಡಿ ಆಯಿದಿಲ್ಲೆ. ಈಗ ಮನಗೆ ಹೋಪಗ ಮಾತಾಡಿಂಡು ಹೋಪಲಕ್ಕು. ಸುಮ್ಮನೆ ಇಲ್ಲಿ ನಿಂದು ತಡಮಾಡುದಕ್ಕಿಂತ ಬೇಗ ಹೋಪಲಕ್ಕು ಕಂಡತ್ತವಂಗೆ.

“ಅಪರೂಪಕ್ಕೆ ಬಂದದಲ್ಲದಾ ನಿಂಗೊ, ರಜ ಹೊತ್ತು ಮಾತಾಡಿಂಡು ಕೂರಿ, ಆನು ಈ ಕೂಸಿಂಗೆ ಮನೆ ತೋರ್ಸಿಕ್ಕಿ ಬತ್ತೆ” ಶೈಲ ಸುಪ್ರಿಯನ ಕೈ ಹಿಡುದು ಕರಕ್ಕೊಂಡು ಹೇಳಿಯಪ್ಪಗ ಅದಕ್ಕೆ ಹೋಗದ್ದೆ ಬೇರೆ ದಾರಿ ಕಂಡತ್ತಿಲ್ಲೆ. ಸುದೀಪನ ಮೋರೆ ನೋಡಿಯಪ್ಪಗ ‘ ಹೋಗು’ ಹೇಳುವಾಂಗೆ ಕಣ್ಣಭಾಶೆ ಮಾಡಿದ.

“ಅತ್ತೆಯ ಮಗ ಹೇಳಿರೆ ತುಂಬ ಇಷ್ಟವಾ?” ಶೈಲಂಗೆ ಅವರ ಕಥಕ್ಕಳಿ ಕಂಡು ನೆಗೆ ಬಂತು.

“ಅಪ್ಪು.. ” ಹೇಳುಗ ಸುಪ್ರಿಯನ ಕೆಪ್ಪಟೆ ಕೆಂಪಾದ್ದು ಕಂಡು ಶೈಲಂಗೆ ಅದರತ್ರೆ ಕೊಂಗಾಟ ಆತು.

“ಅಂಬಗ ನಿಂಗಳೂ ಬನ್ನಿ ಡಾಕ್ಟರೇ….ಇದಕ್ಕೆ ನಿಂಗಳ ಬಿಟ್ಟಿಕ್ಕಿ ಬಪ್ಪಲೆ ಮನಸ್ಸಿಲ್ಲೇಡ” ಶೈಲ ಅವರಿಬ್ರನ್ನೂ ಕುಶಾಲು ಮಾಡಿತ್ತು. ಸುದೀಪಂಗೆ ಮನಸಿಲ್ಲಿ ನೆಗೆ ಬಂದರೂ ಹೆರ ತೋರ್ಸಿದ್ದಾಯಿಲ್ಲೆ. ನಿಧಾನಕೆ ಅವರ ಹತ್ರಂಗೆ ಬಂದ.

ಶೈಲ ಇಡೀ ಮನೆ ತೋರ್ಸಿತ್ತು. ಅಷ್ಟು ದೊಡ್ಡ ಮನೆ ಸುಪ್ರಿಯ ಇಷ್ಟರವರೆಗೆ ಕಂಡಿದಿಲ್ಲೆ. ಹಳೇಕಾಲದ ಮನೆಯ ಒಂದೊಂದು ಉಗ್ರಾಣವೂ ದೊಡ್ಡ ಹಾಲ್ ನಷ್ಟು ವಿಶಾಲ ಇದ್ದತ್ತು. ಈಗ ಎಲ್ಲ ಟೈಲ್ಸ್ ಹಾಕಿ ಫಳಫಳ ಹೇಳುವ ಆ ಮನೆಯ ಚಂದ ಅದರ ಮನಸಿಂಗೆ ಭಾರೀ ಕೊಶಿ ಆತು.

“ಆನು ಸುರೂ ನೋಡುದು ಇಷ್ಟು ದೊಡ್ಡ ಮನೆ.ಮೊದಲು ಈ ಮನೆ ತುಂಬ ಜೆನ ಇತ್ತಿದ್ದವಾ?” ಸುಪ್ರಿಯನ ಪ್ರಶ್ನೆಗೆ ಶೈಲ ಭಾರೀ ನಿದಾನಕೆ ಉತ್ತರ ಕೊಟ್ಟತ್ತು

“ಆನು ಸಣ್ಣಾದಿಪ್ಪಗ ಇಲ್ಲಿ ಎನ್ನ ಅಬ್ಬೆ,ಅಪ್ಪ,ಅಜ್ಜಿ ದೊಡ್ಡಜ್ಜಿ ಮಾಂತ್ರ ಇದ್ದದು. ಅದಕ್ಕಿಂತ ಮದಲು ಅಪ್ಪನ ಅಣ್ಣಂದ್ರು,ಅಪ್ಪಚ್ಚಿಯಕ್ಕೊ ಎಲ್ಲ ಇತ್ತಿದ್ದವಾಡ….”

ಸುದೀಪ ಒಟ್ಟಿಂಗೆ ಇದ್ದ ಕಾರಣ ಸುಪ್ರಿಯ ಧೈರ್ಯಲ್ಲಿ ಅಲ್ಲೆಲ್ಲ ಒಳ ಹೋಗಿ ನೋಡಿತ್ತು.
ಮೇಗೆ ಎಲ್ಲ ನೋಡಿಕ್ಕಿ ಬಂದಿಕ್ಕಿ ಕೆಳಾಣ ಹೊಡೆಲೂ ಪೂರ ಕರಕ್ಕೊಂಡು ಹೋತು. ಹೆರಾಣ ಹೊಡೆಲಿಪ್ಪ ಒಂದು ಸಣ್ಣ ಉಗ್ರಾಣಕ್ಕೆ ಮಾತ್ರ ಕರಕ್ಕೊಂಡು ಹೋಯಿದಿಲ್ಲೆ. ಹೆರಾಂದಲೇ ಲೈಟು ಹಾಕಿ ತೋರ್ಸಿತ್ತು.ಬಾಕಿ ಎಲ್ಲಾದಿಕಂಗೂ ಟೈಲ್ಸ್ ಹಾಕಿ ಹೊಸ ಕ್ರಮ ಮಾಡಿರೂ ಅಲ್ಲಿಗೆ ಮಾತ್ರ ಹಳೇ ಕಾಲದ ಸಾರಣೆ ಹಾಂಗೇ ಇದ್ದತ್ತು. ಅಲ್ಲಿ ಎಂತೋ ವಿಶೇಶ ಇದ್ದೋಳಿ ಆತು ಸುಪ್ರಿಯಂಗೆ. ಅಂದರೂ ಬಾಯಿಬಿಟ್ಟು ಕೇಳ್ಲೆ ಧೈರ್ಯ ಬಯಿಂದಿಲ್ಲೆ.
“ಈ ರೂಂ ಹಳೇಕಾಲದ ಹಾಂಗೇ ಇದ್ದನ್ನೇ. ಮದಲಿಂಗೆ ಇಡೀ ಮನೆ ಹೀಂಗೆ ಇದ್ದದಾ?” ಸುದೀಪ ಕೇಳಿದ. ಶೈಲನ ಮೋರೆ ಬಾಡಿದ್ದು ಸುಪ್ರಿಯಂಗೆ ಗೊಂತಾತು.
“ಅಪ್ಪು, ಆ ಉಗ್ರಾಣದ ಹಿಂದೆ ಒಂದು ಕತೆ ಇದ್ದು ಡಾಕ್ಟರೇ..ಅದೆನ್ನ ತಂಗೆ ಉಪಯೋಗಿಸಿಂಡಿದ್ದ ಉಗ್ರಾಣ!!”

“ನಿಂಗಳ ತಂಗೆ ಇಷ್ಟು ಹೆರ ಇದ್ದದಾ?” ಸುದೀಪಂಗೆ ಆಶ್ಚರ್ಯ ಆತು. ಮನೆಯೊಳ ಅಷ್ಟು ಜಾಗೆ ಇದ್ದರೂ ತಂಗೆ ಹೀಂಗೆ ಮನೆ ಹಿಂದಾಣ ಜಗುಲಿ ಕರೇಯ ಉಗ್ರಾಣ ಉಪಯೋಗಿಸಿಂಡಿದ್ದದೆಂತಕೆ…..!
ಅವ ಹಾಂಗೆ ಕೇಳಿದ್ದು ಒಳ್ಳೆದಾತೂಳಿ ಆತು ಸುಪ್ರಿಯಂಗೆ.

“ಹ್ಹೂಂ……ಅದು ಹೇಳಿ ಪ್ರಯೋಜನ ಇಲ್ಲೆ ಡಾಕ್ಟರೇ.. ಅಬ್ಬೆಯ ಈಗಾಣ ದುಃಖಕ್ಕೆ ಕಾರಣವೇ ಇದು. ಕೇಶವ ಇನ್ನೂ ಮದ್ಲಾಣಾಂಗೆ ಆಯಿದಾಯಿಲ್ಲೆ. ಒಂದರಿ ಕೈಗೆ ಸಿಕ್ಕಿದ್ದರ ಎಂಗಳೇ ಕಳಕ್ಕೊಂಡದು. ಸುರುವಾಣ ಆಘಾತ ತಡೆಯದ್ದೆ ಅಪ್ಪ ತೀರಿ ಹೋದ್ದು. ಎರಡನೇದು ಮತ್ತೂ ಹೆಚ್ಚಿನದ್ದು……..!” ತುಂಬಿ ಬಂದ ಕಣ್ಣೀರಿನ ಸೆರಗಿಲ್ಲಿ ಉದ್ದಿಕ್ಕಿ ಹೇಳಿಯಪ್ಪಗ ಸುಪ್ರಿಯನ ಮನಸ್ಸಿಲ್ಲಿ ಸುಶೀಲನ ಒಂದು ಅವ್ಯಕ್ತ ಚಿತ್ರ ಮೂಡಿ ಬಂತು.

ತಂಗೆ ವಿಶಯಲ್ಲಿ ಎಂತೋ ತಡವಲೆಡಿಯದ್ದ ಸಂಕಟ ಇದ್ದು ಆ ಮನೆಯವಕ್ಕೆ ಹೇಳಿ ಗೊಂತಾದ ಕಾರಣ ಸುದೀಪ ಆ ವಿಶಯವ ಅಲ್ಲೇ ಬಿಟ್ಟ.
“ಒಂದೇ ತಂಗೆ ಡಾಕ್ಟರೇ.. ಕೊಂಗಾಟಲ್ಲಿ ಸಾಂಕಿದ್ದು. ಪಿಯುಸಿ ಪೂರ್ತಿ ಅಪ್ಪಂದಲೂ ಮದಲೇ ಒಂದು ಜನರ ಇಷ್ಟ ಪಟ್ಟು ಅದರೊಟ್ಟಿಂಗೆ ಹೋತು…….! ಈಗ ನಿಂಗೊಗೆ ಅಂದಾಜಾದಿಕ್ಕು” ಶೈಲ ಹೇಳಿದ್ದು ಕೇಳಿ ಸುದೀಪ ತಲೆ ಆಡ್ಸಿದ.

“ಓಹ್!! ಅವು ಮತ್ತೆ ಬಯಿಂದವಿಲ್ಯಾ? ಕೇಳಿದ್ದು ಸುಪ್ರಿಯ

” ಹೂಂ…..ಬಂದದಲ್ಲ, ಎಂಗಳೇ ಕರಕ್ಕೊಂಡು ಬಂದದು…ಆದರೂ ಅದಕ್ಕೆ ಇಲ್ಲಿ ಬದ್ಕುಲೆ ಸರಿಯಾದ ಅವಕಾಶ ಮಾಡಿಕೊಡ್ಲಾಯಿದಿಲ್ಲೆ ಎಂಗೊಗೆ. ಅದರಿಂದಲೂ ಮದಲೇ ಎರಡು ಸಣ್ಣ ಮಕ್ಕಳನ್ನು ಕರಕ್ಕೊಂಡು ಅದು……..!!”

“ಈಗ ಆ ವಿಶಯ ಬೇಡ,ನಾವು ಮನಗೆ ಹೋಪೋ°”  ಸುಪ್ರಿಯ ಎಂತೋ ಕೇಳ್ಲೆ ಹೆರಟಪ್ಪಗ ಸುದೀಪ ಕೈ ಹಿಡುದ. ಅವನ ಭಾಷೆ ಅದಕ್ಕೆ ಅರ್ಥ ಆದಕಾರಣ  ಮತ್ತೆಂತದೂ ಕೇಳದ್ದೆ ಅವನೊಟ್ಟಿಂಗೆ ಹೆರಟತ್ತು.

“ಉಂಡಿಕ್ಕಿ ಹೋದರೆ ಸಾಕಾವ್ತಿತು” ಹೇಳಿ ಮನೆಯವೆಲ್ಲ ಹೇಳಿರೂ “ಇನ್ನೊಂದರಿ ಬತ್ತೆಯ” ಹೇಳಿಕ್ಕಿ ಇಬ್ರೂ ಹೆರಟವು.
ಅಂಬಗಳೂ ಮಾರ್ಗ ಸರಿಯಾಗದ್ದ ಕಾರಣ ಸೀದಾ ಮನಗೆ ಹೆರಟವು.
ಸುಶೀಲನ ಮನೆಯವರ ಎಲ್ಲ ಕಂಡಪ್ಪಗ, ಅವರ ಬೇಜಾರ,ಸಂಕಟ ತುಂಬ ಹತ್ತರಂದ ನೋಡಿಯಪ್ಪಗ ಸುಪ್ರಿಯಂಗೆ ಎಂತದೋ ಹೇಳ್ಲೆಡಿಯದ್ದ ತಳಮಳ ಮನಸಿಲ್ಲಿ ಆಗಿಂಡಿದ್ದತ್ತು.

“ನಿನಗೆ ನಾಳೆ ಹಾಕಲೆ ಡ್ರೆಸ್ ಬೇಡದಾ?” ಸುದೀಪ ಒಂದು ಜವುಳಿ ಅಂಗಡಿ ಮುಂದೆ ನಿಲ್ಸಿಯಪ್ಪಗ ಅದರ ಆಲೋಚನೆಯ ಸರಪ್ಪುಳಿ ತುಂಡಾತು.

ಇನ್ನು ಇನ್ನಾಣ ವಾರಕ್ಕೆ…..

ಪ್ರಸನ್ನಾ ಚೆಕ್ಕೆಮನೆ

4 thoughts on “ಸ್ವಯಂವರ ಭಾಗ 49-ಪ್ರಸನ್ನಾ ವಿ ಚೆಕ್ಕೆಮನೆ

  1. ಛೆ. ಸುಶೀಲ ಈಗ ಜೀವಂತ ಇಲ್ಲೆಯೊ ಅಂಬಗ !! ಭಾರಿ ಕೌತುಕಲ್ಲಿ ಇದ್ದಾನೆ ಕತೆ. ಸುಪ್ರಿಯ ಕೇಳಿದ ಕತೆಯ ಪಾತ್ರಧಾರಿಗೊ ಪ್ರತ್ಯಕ್ಷವಾಗಿ ಕಾಂಬಲೆ ಸಿಕ್ಕಿದ್ದದು ಲಾಯಕಾಯಿದು.
    ಕ್ಲೈಮಾಕ್ಸ್ ಹತ್ರ ಬಂದ ಹಾಂಗಿದ್ದು. ಪ್ರಶ್ನೆಗಳ ಉತ್ತರಕ್ಕೆ ಮುಂದಾಣ ಕಂತಿಂಗೆ ಕಾಯಲೇ ಬೇಕು.

  2. ತುಂಬಾ ಕುತೂಹಲ ಮೂಡಿಸಿಗೊಂಡು ಮುಂದುವರಿತ್ತಾ ಇದ್ದು… ಕಥೆಲಿ ಹಲವು ಟ್ವಿಸ್ಟ್ ಲಾಯ್ಕಾಯಿದು..👌👌👌

  3. ಕಥೆ ಓದುತ್ತ ಹೋದ ಹಾಂಗೆ ಬೇನೆ ಮರುಕಳಿಸಿದ ಅನುಭವ.. ಸುಶಿ ivarottinge ಇಲ್ಲೆಯಾ… ಛೆ..ಅದರ ಜೀವನ ಎಂತಾತು…ಅವು 3 ಜನ ಎಲ್ಲಿದ್ದವು…ಕೇಶವನ ಮದುವೆ hengaathu…ಎಲ್ಲ ಪ್ರಶ್ನೆ ಕಾಡುತ್ತು… ಆದರೂ ಲಾಯ್ಕಲ್ಲಿ ಬರದ್ದೆ …ಕುತೂಹಲ ಹೆಚ್ಚು ಆವುತ್ತು….ವಿಷಯ ಬಿಡಿಸಿ ಬತ್ತಾ ಇದ್ದು…ಕಾಯುವ…..ಮುಂದಾಣ ಭಾಗಕ್ಕೆ…

  4. Kadambariya ee bhaaga oduvaga kannanchili neerilivadu khandita. Aa abbeya vedhane.. egalu mudhi jeeva magala ondari nodekkuli koogudu greshuledittille.. abbeya aase eederali.. maneli punaha modalana santhosha tumbi tulukali… Antima ghatta tumba kutoohalakaari..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×