Oppanna.com

ಸ್ವಯಂವರ : ಕಾದಂಬರಿ : ಭಾಗ 07 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   08/07/2019    0 ಒಪ್ಪಂಗೊ

ಸುಶೀಲನ ನೋಡ್ಲೆ ಹೆರಟ ದೊಡ್ಡಮ್ಮಂಗೆ ಅದರ ಹೆಸರೇಳಿ ಆರೋ ದಿನಿಗೇಳಿಯಪ್ಪಗ ಆಶ್ಚರ್ಯ ಆಗಿ ತಿರುಗಿ ನೋಡಿತ್ತು.

“ಏ…..ಕೇಶವಾ….ನೀನಿಲ್ಲಿ..?ಆರಿಂಗೆ ಎಂತಾಯಿದು? ಅಬ್ಬೆ,ಅಪ್ಪ?….” ದೊಡ್ಡಮ್ಮನ ಮುಂದೆ ಮಡುಗಿದ ಕಾಲು ಅಲ್ಲೇ ನಿಂದತ್ತು. ಹಿಂದಂದ ದೊಡ್ಡಮ್ಮನ ಹೆಸರು ದಿನಿಗೇಳಿದ ಆ ಮಾವನ ಒಪ್ಪಕ್ಕ° ಈಗ ಸರಿಯಾಗಿ ನೋಡಿತ್ತು.

ನೀಲಿ ,ಕಪ್ಪು ಗೆರೆ ಗೆರೆ ಅಂಗಿ ಹಾಕಿದ ಆ ಮಾವನ ನೋಡುಗಲು ಅದಕ್ಕೆ ಒಂದು ವಿಷಯಲ್ಲಿ ಆಶ್ಚರ್ಯ ಆತು.ಅಮ್ಮ, ದೊಡ್ಡಮ್ಮ, ಈ ಮಾವ° ಮೂರು ಜೆನರನ್ನು ಒಂದೇ ಹಾಂಗೆ ಕಾಂಬದೆಂತ…..!!

ಇವರ ಆರನ್ನೂ ಅಪ್ಪನ ಹಾಂಗೆ ಕಾಣ್ತಿಲ್ಲೇಕೆ!

“ಕೇಶೂ ಎಂತ ಮಾತಾಡ್ತಿಲ್ಲೆ? ಎಂತಾತು?” ದೊಡ್ಡಮ್ಮ ಆ ಮಾವನ ಹೆಗಲು ಹಿಡುದು ಕುಲುಕ್ಕಿಸಿ ಕೇಳಿಯಪ್ಪಗ ಅವನ ಕಣ್ಣಿಂದ ನೀರು ಅರಿವಲೆ ಸುರುವಾತು.

“ವಿಷಯ ಎಂತರ ಹೇಳಿ ಹೇಳದ್ರೆ ಹೇಂಗೆ ಎನಗೆ ಗೊಂತಪ್ಪದು?”

ಅಷ್ಟಪ್ಪಗ ಆಗ ಬಂದ ನರ್ಸು ಪುನಃ ಓಡಿಂಡು ಬಂತು.
“ಒಂದರಿ ಈ ಕೂಸಿನ ಒಳ ಕರಕ್ಕೊಂಡು ಹೋವ್ತೆ.ಆ ರೋಗಿ ಅಲ್ಲಿ ಕಂಡಾಪಟ್ಟೆ ಕೂಗಿ,ಉರುಡಿ ಬೊಬ್ಬೆ ಹಾಕುತ್ತಾಯಿದ್ದು…….”

“ಓ…..ಆನೀಗ ಬಂದೆ…..” ನರ್ಸಿನತ್ರೆ ಹೇಳಿದ ದೊಡ್ಡಮ್ಮ ಆ ಮಾವನನ್ನು ಒಟ್ಟಿಂಗೆ ಬಪ್ಪಲೆ ದಿನಿಗೇಳಿತ್ತು

“ನೀನುದೆ ಬಾ….ಕೇಶೂ…ಅಲ್ಲಿ ಸುಶೀ ಇದ್ದು. ಎರಡನೇ ಹೆರಿಗೆ ಕಾಣ್ತು. ಆನು ಮಾತಾಡ್ಸಿದ್ದಿಲ್ಲೆ.ಈಗ ಒಂದರಿ ಹೋಗಿ ಮಾತಾಡಿಕ್ಕಿ ಬಪ್ಪ°”

“ಆನು ಬತ್ತಿಲ್ಲೆ. ಎನಗದರ ಮುಸುಡು ನೋಡೆಡ” ಆ ಮಾವ° ಮೋರೆ ತಿರುಗಿಸಿದ ರೀತಿ ನೋಡಿ ಒಪ್ಪಕ್ಕನ ಕುಞಿ ಮನಸುದೆ ಕುಗ್ಗಿತ್ತು.
‘ಅವಕ್ಕೆ ಎನ್ನ ಅಮ್ಮನತ್ರೆ ಎಂತೋ ಕೋಪ ಇದ್ದು’ ಹೇಳಿ ಅದರ ಒಳ ಮನಸು ಹೇಳಿತ್ತು.

“ಇದು ಸುಶೀಯ ಮಗಳು ಒಪ್ಪಕ್ಕ°.ಇಲ್ಲಿಗೆ ಬಂದ ಮತ್ತೆ ಆನುದೆ ಕಂಡದು.ಅದರ ಇನ್ನೂ ನೋಡ್ಲೆ ಹೋಯಿದಿಲ್ಲೆ. ನೀನು ಬಾರದ್ರೆ ಆನು ಹೋಗಿ ನೋಡಿಕ್ಕಿ ಬತ್ತೆ” ಹೇಳಿ ಒಪ್ಪಕ್ಕನು,ದೊಡ್ಡಮ್ಮನು ಒಳ ಬಂದವು.

ಅಲ್ಲಿ ಮಂಚಲ್ಲಿ ಮನುಗಿಂಡಿದ್ದ ಒಪ್ಪಕ್ಕನ ಅಮ್ಮ “ಎನ್ನ ಮಗಳೂ….ಮಗಳೂ…..ಒಂದರಿ ಬಾ….” ಹೇಳಿ ಭಯಂಕರ ಆರ್ಭಟೆ ಕೊಟ್ಟುಕೊಂಡಿದ್ದತ್ತು.ಅದರ ಕೈ ಕಾಲು ಎಲ್ಲ ಮಂಚಕ್ಕೆ ಕಟ್ಟಿ ಹಾಕಿಂಡಿತ್ತಿದ್ದವು.

ತಲೆಕಸವೆಲ್ಲ ಬಿಕ್ಕಿ ಹಾಕಿ ವಿಕಾರವಾಗಿ ನರಳುವ ಅಮ್ಮನ ಹತ್ತರಂಗೆ ಹೋಪಲೆ ಒಪ್ಪಕ್ಕಂಗೆ ಹೆದರಿಕೆ ಆತು.ದೊಡ್ಡಮ್ಮನ ಕೈಯನ್ನೇ ಗಟ್ಟಿ ಹಿಡ್ಕೊಂಡತ್ತು.

“ಎಂತಾಗ ನೀನು ಹೋಗು” ಹೇಳಿ ದೊಡ್ಡಮ್ಮ ಒಪ್ಪಕ್ಕನ ಕಳ್ಸಿಕ್ಕಿ ರಜ ದೂರ ನಿಂದತ್ತು.ಆದರೆ ಮಗಳ ಕಂಡದೂದೆ “ಮಗಳೂ…..” ಹೇಳಿ ಬೊಬ್ಬೆ ಹಾಕಿ ಕೈ ಕಾಲು ಕುಡುಗಿ ಎದ್ದ ಸುಶೀಲಂಗೆ ಫಕ್ಕನೆ ಎಂತಾತೋ ಗೊಂತಿಲ್ಲೆ. ಕಣ್ಣೆಲ್ಲ ಮೇಗೆ ಮೇಗೆ ಹೋಗಿ, ಬಾಯಿಂದ ಜೊಗುಳಿ ಬಂದು,ಕೈ ಕಾಲೆಲ್ಲ ಧರ್ಸಿದಾಂಗಾಗಿ ಅದರ ಇಡೀ ಮೈಯೇ ಒಂದು ರೀತಿಲಿ ಗಡಗಡ ‌ನಡುಗುಲೆ ಸುರುವಾತು. ಅಲ್ಲಿದ್ದ ನರ್ಸುಗೊ ಅಂಬಗಳೆ ಡಾಕ್ಟರ ಬಪ್ಪಲೆ ಹೇಳ್ಲೆ ಓಡಿದವು.

ಅಮ್ಮಂಗೆ ಹೀಂಗಾದ್ದದು ಕಂಡು ಒಪ್ಪಕ್ಕಂಗೆ ಹೆದರಿ ಜೀವ ಇಲ್ಲದ್ದಾಂಗಾತು.

“ದೊಡ್ಡಮ್ಮಾ…..” ಹೇಳಿ ಅವರ ಕೈಯನ್ನೇ ಮತ್ತೂದೆ ಬಿಗಿಯಾಗಿ ಹಿಡ್ಕೊಂಡು ಎಕ್ಕಿ ಎಕ್ಕಿ ಕೂಗಲೆ ಸುರುಮಾಡಿತ್ತು.

ಅಲ್ಯಾಣ ಅವಸ್ಥೆ ನೋಡಿ ಅದಕ್ಕೂ ಎಂತ ಮಾಡೆಕು ಹೇಳಿ ಅರಡಿಯದ್ದೆ ಕೂಗುವ ಒಪ್ಪಕ್ಕನ ತೆಚ್ಚಿ, ಹೆಗಲಿಲ್ಲಿ ಮನುಶಿ ತಟ್ಟಿಕೊಂಡು ಹೆರ ಬಂತು.

“ಎಂತಾತು?” ದೊಡ್ಡಮ್ಮನ ಮೋರೆಯೂ,ಒಪ್ಪಕ್ಕ ಕೂಗುದೂದೆ ಕಂಡು ಅಷ್ಟಪ್ಪಗ ಅಲ್ಲಿಗೆತ್ತಿದ ದೊಡ್ಡಪ್ಪಂಗು ಎಂತೋ ಆಯಿದು ಹೇಳಿ ಮನಸಿಂಗಾತು.

“ಎಂತಾತು ಗೊಂತಿಲ್ಲೆ, ಆನು ಈ ಕೂಸಿನನ್ನು ಕರಕ್ಕೊಂಡು ಸುಶೀಯ ನೋಡ್ಲೆ ಒಳ ಹೋದ್ದದಷ್ಟೆ.ಎನ್ನ ಕಂಡಿಕ್ಕಿ ಹಾಂಗಾದ್ದಾ ಗೊಂತಿಲ್ಲೆ. ಫಿಟ್ಸ್ ಬಂದ ಹಾಂಗೆ ಕಾಣ್ತು. ಈಗ ಒಳಾಂಗೆ ಕರಕ್ಕೊಂಡು ಹೋದವು ಕಾಣ್ತು. ”

“ಛೇ..ನೀನು ಹಾಂಗೆ ಗಡಿಬಿಡಿ ಮಾಡಿ ನೋಡ್ಲೆ ಹೋಯೆಕಾತಿಲ್ಲೆ.” ಗೆಂಡನ ಮಾತು ಸರಿ ಹೇಳಿ ಅಂಬಗ ಅದಕ್ಕೂ ಆತು.

ಕಾಣದ್ದೆ ನಾಲ್ಕೈದು ವರ್ಷ ಆದ ತಂಗೆಯ ಪರಿಸ್ಥಿತಿ ಭಯಂಕರ ಕಷ್ಟಲ್ಲಿದ್ದೂಳಿ ಅಪ್ಪಗ ಆ ಒಳ್ಳೆ ಮನಸಿನ ದೊಡ್ಡಮ್ಮ ಶೈಲನ ಹೃದಯ ತಡದ್ದಿಲ್ಲೆ. ಹೆಮ್ಮಕ್ಕೊ ಆರೂ ಒಟ್ಟಿಂಗೆ ಇಲ್ಲದ್ದಿಪ್ಪಗ ಎಂತಾರು ಅಗತ್ಯ ಇದ್ದರೆ ಆತೂಳಿ ಒಪ್ಪಕ್ಕನ ಕರಕ್ಕೊಂಡು ಹೋಪಗ ಅದೂದೆ ಒಳ ಹೋದ್ದು.

“ಆದ್ದದು ಆತು,ಅವರವರ ಹಣೆಬರಹ, ಕೆಲವೆಲ್ಲ ಬಪ್ಪದು, ಇನ್ನು ಕೆಲವು ಬರ್ಸುದು.ನಿನ್ನ ತಂಗೆದು ಇದರ್ಲಿ ಎರಡನೇದು.ಹಾಂಗಾಗಿ ನಾವು ಹೆಚ್ಚು ಮಂಡೆಬೆಚ್ಚ ಮಾಡೆಕಾದ ಅಗತ್ಯ ಇಲ್ಲೆ. ನೀನೀಗ ಕೇಶವನತ್ರೆ ಮಾತಾಡಿದೆಯಾ? ಅವಂಗೀಗ ನಮ್ಮ ಅಗತ್ಯ ಹೆಚ್ಚಿಪ್ಪದು.”

“ಇಲ್ಲೆ, ಅವ° ಎಂತದೂ ಸರಿ ಹೇಳಿದ್ದಾ°ಯಿಲ್ಲೆ. ಎಂತಾತು? ಈ ಕೂಸು ಒರಗಿತ್ತು ಪಾಪ!! ಅಬ್ಬೆಯ ಕಂಡು ಹೆದರಿತ್ತು ಕಾಣ್ತು. ….”

“ಒಟ್ಟಾರೆ ನಾವು ಇಲ್ಲಿಗೆ ಬಂದು ಕೆಣುದ ಹಾಂಗಾತು. ಮಕ್ಕೊ ಎಂತ ಮಾಡ್ತವೋ ಏನೋ? ಆನೊಂದರಿ ಅಬ್ಬಗೆ ಪೋನು ಮಾಡಿಕ್ಕಿ ಬತ್ತೆ” ಗೆಂಡ ಪೋನು ಮಾಡ್ಲೆ ಹೆರಟಪ್ಪಗ ಶೈಲ ತಡದತ್ತು.

“ಈ ಇರುಳಪ್ಪಗ ಪೋನು ಮಾಡಿರೆ ಅವಕ್ಕೆ ‘ಎಂತಾತಪ್ಪಾಳಿ’ ಅಕ್ಕು.ಈಗ ಒರಗಿ ಆದಿಕ್ಕು. ಸುಮ್ಮನೇ ಏಳ್ಸುದು ಬೇಡ”

“ಹೋ…..ಸರಿ….ಸರಿ..ಆನು ಗಂಟೆ ನೇರ್ಪ ನೋಡಿದ್ದೇಯಿಲ್ಲೆ.ಮಾವ ಐಸಿಯುವಿಲ್ಲಿ ಇದ್ದವು.ಈಗ ನೋಡ್ಲೆ ಬಿಡ್ತವಿಲ್ಲೆ.ಕೇಶವ ನಿನ್ನತ್ರೆ ಹೇಳಿಕ್ಕೂಳಿ ಗ್ರೇಶಿದೆ”

“ಹ್ಹೇಂ!! ..ಅಪ್ಪಂಗೆಂತಾತು? ” ಒಪ್ಪಕ್ಕನ ಹೆಗಲಿಂದ ಮೆಲ್ಲಂಗೆ ಕೆಳ ಮನುಶಿಕ್ಕಿ ಶೈಲ ಎದ್ದು ನಿಂದತ್ತು.

ದೇವರೇ ಎಂಥಾ ಗ್ರಾಚಾರ ಇದು.ಒಂದು ಹೊಡೆಲಿ ಎಷ್ಟೋ ಸಮಯದ ನಂತರ ಕಂಡ ತಂಗೆಯ ಅವಸ್ಥೆ.ಅದರನ್ನೆ ನೋಡ್ಲೆಡಿತ್ತಿಲ್ಲೆ. ಇನ್ನು ಅಪ್ಪ°!!..
ಜೀವನ ಪೂರ್ತಿ ಕಷ್ಟ ಪಟ್ಟ ಅಪ್ಪನ ಸ್ಥಿತಿ..!! ಮನೆತನ, ಮರ್ಯಾದೆ ಹೇಳಿ ಮನೆತನದ ಗೌರವ ಒಳುಶುವ ಕನಸು ಕಂಡ ಅಪ್ಪಂಗೆ ಬಂದ ಕಷ್ಟ ಯೇವ ಅಪ್ಪಂದ್ರಿಂಗೂ ಬಪ್ಪಲಾಗಪ್ಪಾ……’!
ಎಲ್ಲದಕ್ಕೂ ಕಾರಣ ಈ ಸುಶೀ..ಅಲ್ಲದಾ? ಛೇ…..ಅಬ್ಬೆ ಅಪ್ಪ° ಕಷ್ಟಪಟ್ಟು ಬೆಳೆಶಿದ್ದಕ್ಕೆ ಅದು ಅವಕ್ಕೆ ಕೊಟ್ಟ ಉಡುಗೊರೆ ಇದು..!! ‘ ಹಳೆ ನೆಂಪುಗೊ ಸಮುದ್ರದ ತೆರೆ ಹಾಂಗೆ ಒಂದರ ಹಿಂದೆ ಒಂದಾಗಿ ಬಪ್ಪಗ ಅದು ಕಾಲಿಲ್ಲಿ ಮನುಗಿದ ಒಪ್ಪಕ್ಕನ ಮೋರೆಯನ್ನೇ ನೋಡಿತ್ತು.

ಕಣ್ಣು ಮೂಗು ಎಲ್ಲ ಸುಶೀಲನ ಹಾಂಗೇ. ಸಣ್ಣಾದಿಪ್ಪಗ ಎಷ್ಟು ಚೆಂದ ಅದು.ಬೊಂಬೆಯ ಹಾಂಗೆ ಹೇಳಿ ಎಲ್ಲರೂ ಹೊಗಳುಗು.ಹಾಂಗೇ ಆದಿಕ್ಕು ಅದು ಎಷ್ಟು ಹೊತ್ತಿಂಗೂ ಕನ್ನಾಟಿಯ ಎದುರೇ ನಿಂದೊಂಡಿದ್ದದು.

“ಶೈಲಾ..” ಕೇಶವ ಅತ್ಲಾಗಿ ಎಲ್ಲಿಗೋ ಹೋದವ° ಇವರ ಹತ್ರಂಗೆ ಪುನಾ ಬಂದ°.

“ಅಪ್ಪಂಗೆಂತಾತು ಹೇಳೋ°? ಅಬ್ಬೆ ಮಾಂತ್ರ ಅಲ್ಲಿದ್ದಾ? ಈ ಕೂಸಿನ ಕರಕ್ಕೊಂಡು ಆನೀಗ ಅಬ್ಬೆ ಹತ್ರಂಗೆ ಹೋಪದಾದರು ಹೇಂಗೆ?” ಶೈಲ ಸೆರಗಿಲ್ಲಿ ಕಣ್ಣುದ್ದಿತ್ತು.

“ಸುಶೀ ಮಾಡಿದ್ದೇ ಸರಿ ಹೇಳಿ ನಿನ್ನ ಮನಸಿಂಗೆ ಆವ್ತಾದಿಕ್ಕು.ಕೆಲವೆಲ್ಲ ಹಾಂಗೇ….! ಸುರುವಿಂಗೆ ಎಲ್ಲರೆದುರಿಂಗೆ ದೊಡ್ಡ ಜೆನಪ್ಪಲೆ ಅದು ಮಾಡಿದ್ದು ತಪ್ಪು ಹೇಳಿದ್ದ ನೀನು? ಅದರಿಂದಾಗಿ ಈಗ ಆನು ಅಪ್ಪ°, ಅಬ್ಬೆ ಅನುಭವಿಸುವ ಬಂಙ ನಿನಗೆ ಕಾಣ್ತಿಲ್ಲೆ” ಕೇಶವನ ದೆನಿಲಿಪ್ಪ ಸಂಕಟ ಅವನ ಎದೆಲಿಪ್ಪ ಬೇನೆಯ ಎಲ್ಲ ಹೆರ ಹಾಕಿತ್ತು.

“ಅವರ ಮಗಳು ಓಡಿ ಹೋಯಿದು, ಅವಕ್ಕೆ ಮದಲೇ ಗೊಂತಾದರೂ ತಳಿಯದ್ದೆ ಕೂದಿಕ್ಕಿ ಈಗ ದೊಡ್ಡ ಜೆನರ ಹಾಂಗೆ ನಾಕು ಜೆನರ ಎದುರು ಮೊಸಳೆ ಕಣ್ಣೀರು ಹಾಕುದು”…..

” ಆ ಅಬ್ಬಗೆಂತ ಸ್ವಯ ಇತ್ತಿದ್ದಿಲ್ಯೋ, ದೊಡ್ಡಾದ ಕೂಸುಗಳ ಹೀಂಗೆ ಆರಾರೊಟ್ಟಿಂಗೆ ಹೋಪಲೆ ಬಿಟ್ಟತ್ತನ್ನೇ.ಇವಕ್ಕೆಲ್ಲ ಎಂತರ ಮರ್ಯಾದೆ ಕೊಡುದು?”…..

ಹೀಂಗೇ ಒಂದಲ್ಲ, ಎರಡಲ್ಲ ಹತ್ತಾರು ಜೆನ ಬಾಯಿಗೆ ಬಂದ ಹಾಂಗೆ ಮಾತಾಡಿ, ಮಾತಾಡಿ ಅಪ್ಪನ ಹೇಂಗೆ ಮಾಡಿದವು..ಅಬ್ಬಗಂತೂ ಮನೆಂದ ಹೆರ ಇಳಿವಲೆಡಿಯದ್ದ ಅವಸ್ಥೆ….’

ಶೈಲಂಗೆ ತಮ್ಮ ಹೇಳುದು ಕೇಳುಗ ಇದೆಲ್ಲ ನೆಂಪಾತು. ವರ್ಷಂಗೊ ಎಷ್ಟು ಬೇಗ ಉರುಳುತ್ತು..ಆರು ಯೇವ ವಿಷಯ ಮರದರೂ ಅವರ ಮನಸಿಂದ ಸುಶೀಯ ವಿಷಯ ಮರವಲೆಡಿಗೋ..

ಕೇಶವನ ಒಳ್ಳೆ ಭವಿಷ್ಯ ಹಾಳು ಮಾಡಿದ್ದದೇ ಅದು..
ಅಪ್ಪು.. ….!

ಇನ್ನದರ ಹತ್ರಂಗೆ ಹೋಗದ್ದಿಪ್ಪದೇ ಒಳ್ಳೆದು. ಈ ಕೂಸುದೆ ಅದರ ಮಗಳು.ಮುಂದೆ ಹೇಂಗಾವ್ತೋ ಗೊಂತಿಲ್ಲೆ. ಇದರ ಇಲ್ಲೆಲ್ಯಾರು ಮನುಶಿಕ್ಕಿ ಕೇಶವನತ್ರೆ ಮಾತಾಡೆಕು.ಅವಂಗೆ ಧೈರ್ಯ ಹೇಳ್ಲೆ ಬೇರೆ ಆರಿದ್ದವು.ಇವನ ಪ್ರಾಯದವೆಲ್ಲ ಕೊಶೀಲಿ ಇಪ್ಪಗ ಇವಂಗೆ ಮಾಂತ್ರ ಎಂಥಾ ಕಷ್ಟ……’ !
ಹಾಂಗೆ ಗ್ರೇಶಿಂಡು ಒಪ್ಪಕ್ಕನ ಪುನಾ ಹೆಗಲಿಲ್ಲಿ ಮನುಶಿಕ್ಕಿ ಸುಶೀಲ ಇಪ್ಪ ವಾರ್ಡಿನ ಹತ್ರಂಗೆ ಹೋಪಗ ಮತ್ತದೇ ನರ್ಸು “ನಿಂಗೊ ಸುಶೀಲನ ಪೈಕಿ ಅಲ್ಲದಾ” ಹೇಳಿ ದೊಡ್ಡ ಸ್ವರಲ್ಲಿ ಬೊಬ್ಬೆ ಹಾಕಿಂಡು ಓಡಿ ಬಂತು..

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಈವರೆಗೆ:

ಪ್ರಸನ್ನಾ ಚೆಕ್ಕೆಮನೆ
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×